ಕೆಲೊರಿ
ಉಷ್ಣದ ಪರಿಮಾಣವನ್ನು ಅಳೆಯಲು ಉಪಯೋಗಿಸುವ ಏಕಮಾನ.  ಒಂದು ಗ್ರಾಂ ನೀರಿನ ಉಷ್ಣತೆಯನ್ನು 14.50 ಸೆಂ.ನಿಂದ 15.50  ಸೆಂ.ಗೆ ಏರಿಸಲು ಬೇಕಾಗುವ ಉಷ್ಣ ಪರಿಮಾಣಕ್ಕೆ ಒಂದು ಕೆಲೊರಿ ಎಂದು ಹೆಸರು.  ಇದರ ಪರಿಮಾಣ ಅಳೆಯುವ ಪರಿಸ್ಥಿತಿ ಹಾಗೂ ಸ್ಥಳವನ್ನು ಅವಲಂಬಿಸಿದೆ.  ಆದರೆ ಈಗ ವಿದ್ಯುನ್ಮಾನಗಳಲ್ಲಿ ಕೆಲೊರಿಯನ್ನು ಹೆಚ್ಚು ನಿಖರವಾಗಿ ಅಳೆಯಬಹುದು.  20ನೆಯ ಶತಮಾನದ ಸಾಧನ ಹಾಗೂ ನಿಖರತೆಯ ವಿಧಾನಗಳಿಂದಾಗಿ ನೀರಿನ ಸಾಪೇಕ್ಷ ಉಷ್ಣತೆಯ ಆದರ್ಶದ ಆಧಾರದಿಂದ ಉಷ್ಣವನ್ನು ಅಳೆಯುವುದರ ಜೊತೆಗೆ ಜೌಲನ್ನು ಆದರ್ಶಮಾನವನ್ನಾಗಿ ತೆಗೆದುಕೊಳ್ಳಲಾಗಿದೆ.
ಕಿಲೋ ಕೆಲೊರಿ:  ಇದು 1,000 ಕೆಲೊರಿಗಳಿಗೆ ಸಮ.  ತಂತ್ರಶಾಸ್ತ್ರಜÐರು ಇದನ್ನು ಬಳಸುತ್ತಾರೆ.  ಇನ್ನು, ಒಂದು ಪೌಂಡ್ ಕೆಲೊರಿ 453.6 ಕಿಲೊರಿಗಳಿಗೆ ಸಮ.  ಲಂಡನ್ನಿನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಒಂದು ಕೆಲೊರಿ (1/860) ವಾಟ್-ಗಂಟೆಗೆ ಸಮ ಎಂದು ಖಚಿತಪಡಿಸಲಾಯಿತು.

ಕೆಲೊರಿ ಮಾಪನ:  ಭೌತ ಹಾಗೂ ರಾಸಾಯನಿಕವಾಗಿ ವಸ್ತುವಿನ ಸ್ಥಿತಿಯಲ್ಲಿ ಬದಲಾವಣೆ ಆದಾಗ ಬಿಡುಗಡೆಯಾಗುವ ಅಥವಾ ಹೀರಿಕೊಳ್ಳುವ ಉಷ್ಣದ ಪರಿಮಾಣವನ್ನು ಅಳೆಯುವ ವಿಜಾÐನ (ಕೆಲೊರಿಮೆಟ್ರಿ).  ಉಷ್ಣವನ್ನು, ಪರೋಕ್ಷವಾಗಿ, ಅದು ಉಂಟು ಮಾಡುವ ಪರಿಣಾಮಗಳಿಂದ ಅಳೆಯಬಹುದು.  ಉದಾಹರಣೆಗೆ ಉಷ್ಣತಾ ವ್ಯತ್ಯಾಸ, ಭೌತಸ್ಥಿತಿ ಬದಲಾವಣೆ, ಶಕ್ತಿ ರೂಪಾಂತರ ಇತ್ಯಾದಿ.  ಯಾವುದಾದರೂ ಒಂದು ವಸ್ತು ಮತ್ತು ವಾತಾವರಣದ ನಡುವಣ ಶಕ್ತಿ ವಿನಿಮಯ ಉಷ್ಣ ಅಥವಾ ಕಾರ್ಯ ಅಥವಾ ಎರಡರ ರೂಪದಲ್ಲೂ ಇರಬಹುದು.  ಕೆಲೊರಿಮಾಪನ ಶಕ್ತಿ ಬದಲಾವಣೆಗಳನ್ನು ನಿರ್ಧರಿಸಲು ಬಹಳ ಅನುಕೂಲವಾಗಿದೆ.  ಉಷ್ಣರೂಪದ ಶಕ್ತಿಯನ್ನು ಅಳೆಯುವ ಸಾಧನದ ಹೆಸರು ಕೆಲೊರಿಮಾಪಕ.  ಇದರಲ್ಲಿ ಅನೇಕ ಬಗೆಗಳಿವೆ:  ಶಕ್ತಿ ಉಷ್ಣವಾಗಿ ರೂಪಾಂತರ ಹೊಂದಿದ ಪರಿಮಾಣವನ್ನು ಇವು ಅಳೆಯಬಲ್ಲವು.  ಸಾಮಾನ್ಯವಾಗಿ ಮೂರು ಘಟಕಗಳನ್ನು ಅಳೆಯುವುದರಿಂದ ಕೆಲೊರಿಮಾಪನ ಸಾಧ್ಯ:

ಕೆಲೊರಿಮಾಪಕ ಮತ್ತು ಅದರಲ್ಲಿರುವ ವಸ್ತುಗಳ ಉಷ್ಣತೆಯನ್ನು ಅಳೆಯುವಕೆ.
ಹೊರಗಿನಿಂದ ಕೆಲೊರಿಮಾಪಕಕ್ಕೆ ಸೇರಿಸಿದ ಶಕ್ತಿಯ ಪರಿಮಾಣ.

ಕೆಲೊರಿಮಾಪಕ ಹಾಗೂ ವಾತಾವರಣ ಇವುಗಳ ನಡುವಣ ಶಕ್ತಿವಿನಿಮಯ ಪರಿಮಾಣದ ಅಳೆಯುವಿಕೆ.

ಏರಿದ ಉಷ್ಣತೆ ಹೆಚ್ಚಾದ ಉಷ್ಣದ ಪರಿಮಾಣಕ್ಕೆ ಅನುಪಾತದಲ್ಲಿರುತ್ತದೆಂದು ಹಳೆಯ ಸಾಧನಗಳಿಂದ ಮಾಡಿದ ಪ್ರಯೋಗಗಳಿಂದ ತಿಳಿದುಬಂದಿತು.  ಇದರಿಂದ ಉಷ್ಣತೆಯೊಂದಿಗೆ ಏರುವ ಉಷ್ಣದ ದರ sಗೆ ಗ್ರಾಹ್ಯೋಷ್ಣ (ಸ್ಟೆಸಿಫಿಕ್ ಹೀಟ್) ಎನ್ನಬಹುದು.

ಸಾಮಾನ್ಯವಾಗಿ ಇತ್ತೀಚೆಗೆ ಕೆಲೊರಿಮಾಪನ ವಿಧಾನದಲ್ಲಿ ಬಿಡುಗಡೆಯಾದ ಅಥವಾ ಹೀರಿಕೊಂಡ ಶಕ್ತಿಯ ಪರಿಮಾಣವನ್ನು ವಿದ್ಯುಚ್ಛಕ್ತಿಯ ರೂಪದಲ್ಲಿ ಬಿಡಿಸುತ್ತಾರೆ.  ಇದನ್ನು ಉಷ್ಣಜನಕ (ಎಕ್ಸೋಥರ್ಮಿಕ್) ವಿಧಾನ, ಉಷ್ಣಗ್ರಾಹಕ (ಎಂಡೋಥರ್ಮಿಕ್) ಮತ್ತು ಉಷ್ಣಧಾರಣ ಸಾಮಥ್ರ್ಯ (ಹೀಟ್ ಕೆಪ್ಯಾಸಿಟಿ) ವಿಧಾನ ಎಂಬ ಮೂರು ರೀತಿಯಲ್ಲಿ ಮಾಡುತ್ತಾರೆ.  ವಿದ್ಯುಚ್ಛಕ್ತಿ ಹಾಗೂ ಉಷ್ಣತೆಗಳನ್ನು ನವೀನ ಸಾಧನಗಳಿಂದ ಬಹಳ ನಿಖರವಾಗಿ ಅಳೆಯಬಹುದು.  ಕೆಲೊರಿಮಾಪಕ ಹಾಗೂ ವಾತಾವರಣ ಒಂದೇ ಉಷ್ಣತೆಯಲ್ಲಿರದಿದ್ದಾಗ ಹೆಚ್ಚಿನ ಉಷ್ಣತೆಯಿಂದ ಕಡಿಮೆ ಉಷ್ಣತೆ ಇರುವ ಕಡೆಗೆ ಉಷ್ಣ ವಿನಿಮಯಮಾಪಕ ಹಾಗೂ ವಾತಾವರಣದ ನಡುವಣ ಸ್ಥಳವನ್ನು ಶೂನ್ಯ ಮಾಡುವುದರಿಂದಲೂ ಸರಿಯಾದ ಆಕಾರವುಳ್ಳ ಕೆಲೊರಿಮಾಪಕ ಹಾಗೂ ಸರಿಯಾದ ಲೋಹದ ವಿದ್ಯುತ್ ಸಂಪರ್ಕ ತಂತಿಗಳನ್ನು ಆಯ್ಕೆ ಮಾಡುವುದರಿಂದಲೂ ಮಾಪಕಕ್ಕೆ ಮೆರುಗು ಕೊಡುವುದರಿಂದಲೂ ಉಷ್ಣ ವಿನಿಮಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು. 	 (ನೋಡಿ- ಉಷ್ಣದ-ಪರಿಮಾಣ)                  
     (ಎಸ್.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ